ಇಂದ್ರಿಯಗಳು
ವಿಷಯಗಳನ್ನು ಅರಿಯುವ ಸಾಧನಗಳು. ಇಂದ್ರಿಯವೆಂಬ ಪದಕ್ಕೆ ಶಕ್ತಿಯೆಂದರ್ಥ. ಶಕ್ತಿ ಎಂದರೆ ಗ್ರಹಣ ಸಾಮಥ್ರ್ಯವೆಂದು ಇಲ್ಲಿನ ತಾತ್ಪರ್ಯ. ಉಪನಿಷತ್ತಿನಲ್ಲಿ ಇಂದ್ರಿಯಗಳನ್ನು ಸಮಷ್ಟಿಯಲ್ಲಿ ಪ್ರಾಣವೆಂದು ವ್ಯವಹರಿಸಿ ವೈಯುಕ್ತಿಕವಾಗಿ ಗ್ರಹ (ಹಿಡಿಯುವುವು) ಎಂದು ಕರೆದಿದ್ದಾರೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯ ಜರತ್ಕಾರವನಿಗೆ ಎಂಟು ಇಂದ್ರಿಯಗಳನ್ನು ಹೇಳಿದ್ದಾನೆ : ಪ್ರಾಣ, ವಾಕ್, ಜಿಹ್ವೆ, ಚಕ್ಷುಸ್ಸು, ಶ್ರೋತ್ರ, ಮನಸ್ಸು, ಹಸ್ತೌ (ಕೈಗಳು), ತ್ವಕ್ (ಚರ್ಮ). ಇನ್ನೊಬ್ಬ ಉಪನಿಷದೃಷ್ಟಿಯಾದ ಗಾಗ್ರ್ಯಾಯಣಿ ಈ ಎಂಟಕ್ಕೆ ಪಾದ, ಪಾಯೂಪಸ್ಥಗಳನ್ನು ಸೇರಿಸಿದ್ದಾನೆ. ಕಾಲಕ್ರಮದಲ್ಲಿ ಇಂದ್ರಿಯಗಳು ಹತ್ತೆಂಬ ಎಣಿಕೆ ಪ್ರಚಲಿತವಾಯಿತು. ಜ್ಞಾನೇಂದ್ರಿಯಗಳು ಐದು. (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ.), ಕರ್ಮೇಂದ್ರಿಗಳು ಐದು, (ಕೈ, ಕಾಲು, ಮಾತು, ಪಾಯು, ಉಪಸ್ಥಾ) ಎಂಬ ವಿಭಾಗವೂ ಸಿದ್ಧವಾಯಿತು. 
ಉಪನಿಷತ್ತಿನಲ್ಲಿ ಪ್ರಾಣಸಂವಾದವೆಂಬ ಪ್ರಸಂಗ ಬರುತ್ತದೆ. ಒಮ್ಮೆ ಇಂದ್ರಿಯಗಳಲ್ಲಿ ಯಾರು ಹೆಚ್ಚೆಂಬ ವಿವಾದ ಎದ್ದಿತು. ಅವರು ಪ್ರಜಾಪತಿಯ ಬಳಿಗೆ ಹೋಗಿ ವಿವಾದವನ್ನು ಪರಿಹರಿಸುವಂತೆ ಕೇಳಿಕೊಂಡರು. ಪ್ರಜಾಪತಿ ಯಾವ ಇಂದ್ರಿಯವಿಲ್ಲದೆ ದೇಹವು ನಿಲ್ಲಲಾರದೋ ಆ ಇಂದ್ರಿಯವೇ ಹೆಚ್ಚೆಂದು ಹೇಳಿದ. ಇದನ್ನು ಪ್ರಯೋಗದಿಂದ ನಿಶ್ಚಯಿಸಲು ಮೊದಲು ಮಾತು ದೇಹದಿಂದ ದೂರ ಹೋಗಿ ಒಂದು ಸಂವತ್ಸರದ ಅನಂತರ ಮರಳಿ ಬಂತು. ಬಂದಾಗ ದೇಹ ಉಳಿದೇ ಇತ್ತು. ಎಲ್ಲ ಕ್ರಿಯೆಗಳೂ ಎಂದಿನಂತೆ ನಡೆಯುತ್ತಿದ್ದುವು. ಆದರೆ ಮೂಗನಂತೆ, ಅನಂತರ ಕಣ್ಣು ಒಂದು ವರ್ಷಕಾಲ ದೇಹದಿಂದ ದೂರ ನಿಂತಿತು. ಆಗಲೂ ದೇಹ ಉಳಿದೇ ಇತ್ತು, ಕುರುಡನಂತೆ. ಹೀಗೆಯೇ ಕಿವಿಗಳು, ಮನಸ್ಸು, ಒಂದೊಂದು ವರ್ಷ ದೂರವಿದ್ದು ಬಂದುವು. ಪ್ರಾಣದ ಸರದಿ ಬಂದು ಪ್ರಾಣ ದೇಹದಿಂದ ದೂರ ಹೋಗಲು ಯತ್ನಿಸಲು ಬಲಶಾಲಿಯಾದ ಕುದುರೆ ಗೂಟಕಿತ್ತು ಓಡಲೆಳೆಸುವಂತೆ ಇತರ ಇಂದ್ರಿಯಗಳಿಗೆ ಆಯಿತು. ಆಗ ಅವರೆಲ್ಲ ಪ್ರಾಣವೇ ಹೆಚ್ಚೆಂದು ಒಪ್ಪಿಕೊಂಡರು. ಈ ನಿರೂಪಣೆಯಲ್ಲಿ ಮನಸ್ಸನ್ನೂ ಇಂದ್ರಿಯವೆಂದು ಹೇಳಿರುವುದು ಸ್ವಾರಸ್ಯವಾಗಿದೆ. ಮನಸ್ಸನ್ನು ಏಕಾದಶೇಂದ್ರಿಯವೆಂದೂ ನಿರೂಪಿಸುತ್ತಾರೆ. 

ಮನಸ್ಸಿಗೂ ಇಂದ್ರಿಯಗಳಿಗೂ ನಿಕಟಸಂಬಂಧವುಂಟು. ವೇದಾಂತದ, ಸಾಂಖ್ಯದ ಪ್ರಕ್ರಿಯೆಯಲ್ಲಿ ಪ್ರತಿ ಇಂದ್ರಿಯಕ್ಕೂ ಸ್ಥಾನವನ್ನೂ ವೃತ್ತಿಯನ್ನೂ ನಿರ್ದೇಶಿಸುತ್ತಾರೆ. ಇಂದ್ರಿಯಸ್ಥಾನವೆಂದರೆ ಭೌತಿಕವಾದ ಇಂದ್ರಿಯ, ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ : ಇಂದ್ರಿಯವೃತ್ತಿಯೆಂದರೆ ಆಯಾಸ್ಥಾನಗಳಲ್ಲಿ ಪ್ರವೃತ್ತವಾಗುವ ವ್ಯಾಪಾರವಿಶೇಷ-ನೋಡುವುದು, ಕೇಳುವುದು, ಮೂಸುವುದು, ರುಚಿ ನೋಡುವುದು, ಸ್ಪರ್ಶವನ್ನು ಗ್ರಹಿಸುವುದು. ಇಂದ್ರಿಯವೃತ್ತಿಯಲ್ಲಿ ಮನಸ್ಸಿನ ಪ್ರವೇಶವಿದೆ. ಈ ಮಾನಸಿಕ ವ್ಯಾಪಾರವಿಲ್ಲದಿದ್ದರೆ ಇಂದ್ರಿಯ ಸಹಜ ಜ್ಞಾನ ಉಂಟಾಗದು. ಅದರಿಂದ ಉಂಟಾದ ಗ್ರಹಣ ಪ್ರತ್ಯಕ್ಷವೆನಿಸಿಕೊಳ್ಳುವುದಿಲ್ಲ. ಅದು ಬರಿಯ ಸಂವೇದನೆ. ಸಾಮಾನ್ಯವಾಗಿ ಕಣ್ಣು ನೋಡುತ್ತಿದ್ದರೂ ಮನಸ್ಸು ಅನ್ಯಾಸಕ್ತವಾಗಿದ್ದಾಗ ಮನಸ್ಸು ಎಲ್ಲಿಯೋ ಇದ್ದಿತು, ನೋಡಲಿಲ್ಲ, (ಅನ್ಯತ್ರಮೇ ಮನೋsಭೂತ್, ನಾದ್ರಾಕ್ಷಂ) ಎಂದು ಹೇಳುತ್ತೇವೆ. ಇಂದ್ರಿಯಕ್ಕೆ ಗ್ರಹಣಶಕ್ತಿ ಬರುವುದು ಮನಸ್ಸಿನ ಸನ್ನಿಧಾನದಿಂದಲೇ. ಬೌದ್ಧರು ಕೂಡ ಇಂದ್ರಿಯಗಳನ್ನು ಪ್ರಸಾದವೆಂದು ಕರೆದು ಮನಸ್ಸನ್ನು (ಹೃದಯವನ್ನು) ಇಂದ್ರಿಯಗಳಿಗೆ ಸೇರಿಸಿದ್ದಾರೆ. 
ಒಂದೊಂದು ಇಂದ್ರಿಯಕ್ಕೂ ವ್ರತವಿದೆ ಎಂದರೆ ಅದಕ್ಕೆ ವಿವಿಕ್ತವಾದ ಕಾರ್ಯ ಕ್ಷೇತ್ರವಿದೆ. ಕಣ್ಣು ರೂಪವನ್ನು ಮಾತ್ರ ಗ್ರಹಿಸಬಲ್ಲುದು. ಕಿವಿ ಶಬ್ದವನ್ನು ಮಾತ್ರ ಕೇಳಬಲ್ಲುದು. ಮೂಗು ವಾಸನೆಯನ್ನು ಮಾತ್ರ ಗ್ರಹಿಸಬಲ್ಲುದು. ನಾಲಗೆ ರುಚಿಯನ್ನು ಮಾತ್ರ ನೋಡಬಲ್ಲುದು. ಚರ್ಮ ಮುಟ್ಟಿದುದನ್ನು ಮಾತ್ರ ಗ್ರಹಿಸಬಲ್ಲುದು. ಒಂದು ಇನ್ನೊಂದರ ಕೆಲಸವನ್ನು ಮಾಡದು. ಈ ಇಂದ್ರಿಯ ವಿಷಯ ವ್ಯವಸ್ಥೆಗೆ ಬೌದ್ಧರ ಪ್ರಕ್ರಿಯೆಯಲ್ಲಿ ಗೋಚರವೆನ್ನುತ್ತಾರೆ. ಕಠೋಪನಿಷತ್ತಿನಲ್ಲೂ ಇಂದ್ರಿಯಗಳನ್ನು ಕುದುರೆಗಳೆಂದು ಕರೆದು ವಿಷಯಗಳನ್ನು ಗೋಚರವೆಂದಿದ್ದಾರೆ. (ಇಂದ್ರಿಯಾಣಿ ಹಯಾನ್ಯಾಹುರ್ವಿಷಯಾನ್‍ತೇಷು ಗೋಚರಾನ್) ಇಲ್ಲಿ ಮನಸ್ಸನ್ನು ಪ್ರಗ್ರಹವೆಂದು (ಕಟ್ಟಿರುವ ಹಗ್ಗ) ವ್ಯವಹರಿಸಿದ್ದಾರೆ. ಇಂದ್ರಿಯ ವ್ಯಾಪಾರದಲ್ಲಿ ಮನಸ್ಸಿನ ಪಾತ್ರವನ್ನು ವಾಚಸ್ಪತಿಮಿಶ್ರ ಸಂಕಲ್ಪವೆಂದು ನಿರ್ದೇಶಿಸಿದ್ದಾನೆ. ಸಂಕಲ್ಪವೆಂದರೆ ಚೆನ್ನಾಗಿ ಮಾಡುವುದೆಂದರ್ಥ. ಇಂದ್ರಿಯಗಳು ವರ್ತಮಾನಕಾಲದಲ್ಲಿ ಮಾತ್ರ ಪ್ರವೃತ್ತವಾಗುತ್ತವೆ; ಎಂದ ಮೇಲೆ ಅವುಗಳಿಂದಾಗುವ ಗ್ರಹಣ ಅಸ್ಪಷ್ಟವಾಗಿ ಅಪೂರ್ಣವಾಗಿರುತ್ತದೆ. ಅಲ್ಲದೆ ನಿರ್ದಿಷ್ಟ ವಿಷಯವನ್ನಷ್ಟೇ ಪ್ರತಿ ಇಂದ್ರಿಯವೂ ಗ್ರಹಿಸುವುದು. ಮನಸ್ಸಾದರೆ ಭೂತಭವಿಷ್ಯ ವರ್ತಮಾನಗಳಲ್ಲೆಲ್ಲ ಪ್ರವೃತ್ತವಾಗಬಲ್ಲುದು. ಎಲ್ಲ ವಿಷಯಗಳನ್ನೂ ಗ್ರಹಿಸಬಲ್ಲುದು. ಇದರ ಸಹಕಾರವಿಲ್ಲದೆ ಇಂದ್ರಿಯಜನ್ಯಜ್ಞಾನ ಅರ್ಥಕಾರಿಯಾಗದು. ಈ ದೃಷ್ಟಿಯಿಂದ ಸಾಂಖ್ಯರು ಮನಸ್ಸನ್ನು ಅಂತರಿಂದ್ರಿಯವೆಂದೂ ಉಳಿದ ಇಂದ್ರಿಯಗಳನ್ನು ಬಹಿರಿಂದ್ರಿಯಗಳೆಂದೂ ವ್ಯವಹರಿಸಿದ್ದಾರೆ. 

ಜೈನರು ಮನಸ್ಸನ್ನು ಅನಿಂದ್ರಿಯವೆಂದೂ ನೋಇಂದ್ರಿಯವೆಂದೂ ನಿರ್ದೇಶಿಸುತ್ತಾರೆ. ಪ್ರತ್ಯಕ್ಷವೆಂಬುದು ವಿಷಯಗತವಾದ ಇಂದ್ರಿಯ ವ್ಯಾಪಾರ. ಸಾಮಾನ್ಯವಾದ ವಿಷಯಗ್ರಹಣ ಪ್ರವೃತ್ತಿಯನ್ನು ಅವರು ಇಂದ್ರಿಯ ಪ್ರತ್ಯಕ್ಷವೆಂದು ವ್ಯವಹರಿಸುತ್ತಾರೆ. ಪಾಣಿನಿ ಇಂದ್ರಿಯವೆಂಬ ಪದಕ್ಕೆ ಇಂದ್ರನ ಲಕ್ಷಣವೆಂದು ವ್ಯುತ್ಪತ್ತಿ ಹೇಳುತ್ತಾನೆ. ಇಂದ್ರನೆಂದರೆ ಇಲ್ಲಿ ವ್ಯಕ್ತಿಗತವಾದ ಪ್ರಾಣ. ಜೈನರು ಇಂದ್ರನೆಂದರೆ ಕರ್ಮವೆಂದು ಅರ್ಥ ಹೇಳುತ್ತಾರೆ. ಇಂದ್ರಿಯ ಪ್ರತ್ಯಕ್ಷವನ್ನು ಮಾಣಿಕ್ಯನಂದಿ ಸಂವ್ಯವಹಾರಿಕ ಪ್ರತ್ಯಕ್ಷವೆಂದಿದ್ದಾನೆ. ಜೈನಪರಿಭಾಷೆಯಲ್ಲಿ ಇಂದ್ರಿಯಕ್ಕೆ ದ್ರವ್ಯ ಮತ್ತು ಭಾವ ಎಂಬ ಎರಡು ಪ್ರಕಾರಗಳಿವೆ. ದ್ರವ್ಯವೆಂದರೆ ಭೌತಿಕವಾದ ಸ್ವರೂಪ. ಭೌತಿಕವಸ್ತುಗಳನ್ನು ಆಯ್ದುಕೊಳ್ಳುವ ವ್ಯಾಪಾರ. ವಿಷಯೇಂದ್ರಿಯ ಸಂಬಂಧ ಹೀಗೆ ಭೌತಿಕವಾದದ್ದು. ಇದನ್ನು ಆಶ್ರಯಿಸಿ ನಿಂತ ಭಾವ ಮಾನಸಿಕವಾದದ್ದೆನ್ನಬಹುದು. ಇದು ಲಬ್ಧಿ ಮತ್ತು ಉಪಯೋಗ ಎಂದು ಎರಡು ಹಂತಗಳಲ್ಲಿ ಒದಗುತ್ತದೆ. ಲಬ್ಧಿಯೆಂದರೆ ವಿಷಯಕ್ಕೆ ಅನುಗುಣವಾದ ಇಂದ್ರಿಯವ್ಯಾಪಾರವನ್ನು ಉದ್ಭೋಧಿಸುವುದು. ಉಪಯೋಗವೆಂದರೆ ಲಬ್ಧಿಯಿಂದಾಗಿ ಜೀವ ವಿಷಯದ ಆಕಾರವನ್ನು ಗ್ರಹಿಸಿ ಮಾರ್ಪಡುವುದು. ಎಂದರೆ ಇಂದ್ರಿಯಪ್ರತ್ಯಕ್ಷದಲ್ಲಿ ಮನಸ್ಸಿನ ವ್ಯಾಪಾರವಿದ್ದೇ ಇರಬೇಕು. ಆ ಇಂದ್ರಿಯಗಳು ಮನಸ್ಸಿನ ಸಹಕಾರವಿಲ್ಲದೆ ಯಾವ ಗ್ರಹಣಕ್ರಿಯೆಯಲ್ಲೂ ಪ್ರವೃತ್ತವಾಗವು, ಸಮರ್ಥವಾಗವು. ಆದರೆ ಮನಸ್ಸು ಇಂದ್ರಿಯವಲ್ಲವೆಂದು ಭಾವಿಸುವ ಜೈನರು ಅದನ್ನು ಅನಿಂದ್ರಿಯವೆನ್ನುತ್ತಾರೆ. ದೇವನಂದಿಯಾದರೂ ಮನಸ್ಸಿನಲ್ಲಿ ಇಂದ್ರಿಯದ ಸ್ವಭಾವ ಸೇರಿದೆಯೆಂದು ವಾದಿಸಿ ಅದನ್ನೂ ನೋಇಂದ್ರಿಯವೆಂದಿದ್ದಾನೆ. 

ಸರ್ವಾಸ್ತಿವಾದಿ ಬೌದ್ಧರು ಐದು ಜ್ಞಾನೇಂದ್ರಿಯಗಳನ್ನೂ (ರೂಪ, ಶಬ್ದ, ಗಂಧ, ರಸ, ಸ್ಪರ್ಶ) ಒಪ್ಪಿ ವಿಶ್ಲೇಷಣೆ ಮಾಡಿದ್ದಾರೆ. ಚಕ್ಷುರಿಂದ್ರಿಯ ವರ್ಣ ಮತ್ತು ಸಂಸ್ಥಾನ (ಎಂದರೆ ರೂಪ) ಎಂದು ಎರಡು ಬಗೆ. ನೀಲ, ಪೀತ, ಲೋಹಿತ, ಅವದಾತ (ಬಿಳಿ) ಇವು ವರ್ಣ; ಉದ್ದ, ಗಿಡ್ಡ, ವರ್ತುಲ, ಚಚ್ಚೌಕ, ಎತ್ತರ, ಸರಳ, ವಕ್ರ-ಇವೆಲ್ಲ ಸಂಸ್ಥಾನ. ಶ್ರೋತ್ರೀಂದ್ರಿಯ (ಶಬ್ದವಿಷಯ) ಎಂಟು ಬಗೆ. ಘ್ರಾಣೇಂದ್ರಿಯ (ಗಂಧವಿಷಯ), ದುರ್ಗಂಧ, ಸಮಗಂಧ, ವಿಷಮಗಂಧ ಎಂದು ಮೂರು ಬಗೆ. ಜಿಹ್ವೇಂದ್ರಿಯ (ರಸವಿಷಯ) ಮಧುರ, ಆಮ್ಲ, ಲವಣ, ಕಟು, ತಿಕ್ತ, ಕಷಾಯ ಎಂದು ಆರು ವಿಧ. ಕಾಯೇಂದ್ರಿಯ (ಸ್ಪರ್ಶವಿಷಯ) ಆಪ, ತೇಜ, ವಾಯು, ಪೃಥಿವೀ ಎಂಬ ನಾಲ್ಕು ಬಗೆಗಳಲ್ಲಿ ಭೌತಿಕಸ್ಪರ್ಶವಿಷಯವೆನಿಸುತ್ತದೆ. ಶ್ಲಕ್ಷ್ಣತ್ವ , ಕರ್ಕಶತ್ವ, ಲಘುತ್ವ, ಗುರುತ್ವ, ಶೀತ, ಜಿಘತ್ಸಾ (ಹಸಿವು), ಪಿಪಾಸಾ (ನೀರಡಿಕೆ) ಎಂಬ ಏಳು ಬಗೆಗಳಲ್ಲಿ ಭೌತಿಕ ಸ್ಪರ್ಶವಿಷಯವೆನಿಸುತ್ತದೆ. ಇವರು ಪಂಚೇಂದ್ರಿಯಗಳನ್ನು ಚಿತ್ತೋತ್ಪಾದ ಸಮರ್ಥವಾದುದೆಂದು ಬಣ್ಣಿಸುತ್ತಾರೆ. ಒಂದೊಂದು ಇಂದ್ರಿಯಕ್ಕೂ ಅನುರೂಪವಾದ ವಿಜ್ಞಾನವಿದೆ; ಮನೋವಿಜ್ಞಾನವೂ ಸೇರಿದಂತೆ ಆರು ಇಂದ್ರಿಯ ವಿಜ್ಞಾನಗಳು ವಿಜ್ಞಾನಸ್ಕಂಧವೆನಿಸಿಕೊಳ್ಳುತ್ತವೆ. ಮೊದಲ ಐದು ವಿಜ್ಞಾನಗಳಿಗೆ ಸ್ವಭಾವ ನಿರ್ದೇಶವಿದೆ. ಎಂದರೆ ಇಂದ್ರಿಯಸಹಜವಾದ ವ್ಯಾಪಾರಗಳಿಂದ ವಿಶಿಷ್ಟವಾದ ವಿಷಯವನ್ನಷ್ಟೇ ಅರಿಯುವ ಸಾಮಥ್ರ್ಯವಿದೆ. ಸಂಪೂರ್ಣವಾದ ನಿರ್ದೇಶನಶಕ್ತಿಯಿಲ್ಲದಿರುವುದರಿಂದ ಇವನ್ನು ಅನಿರ್ದೇಶನವೆನ್ನುತ್ತಾರೆ. ಆರನೆಯದಾದ ಮನೋವಿಜ್ಞಾನ ಪ್ರಯೋಗನಿರ್ದೇಶ ಮತ್ತು ಅನುಸ್ಮøತಿನಿರ್ದೇಶಗಳಿಂದ ಸಂಪನ್ನವಾದುದು, ಆದುದರಿಂದ ಇದನ್ನು ಸನಿರ್ದೇಶವೆನ್ನುತ್ತಾರೆ. 

ಪ್ರತಿಯೊಂದು ಇಂದ್ರಿಯಕ್ಕೂ ಪ್ರತ್ಯಕ್ಷ ವ್ಯಾಪಾರವನ್ನು ಉತ್ಪತ್ತಿ ಮಾಡುವುದು, ವಿಷಯಗಳಿಂದ ಉದ್ಭೋಧನೆ ಪಡೆಯುವುದು ಮತ್ತು ಜೀವಿಯನ್ನು ಸಂರಕ್ಷಿಸುವುದು-ಈ ಮೂರು ಗುಣಗಳಿವೆಯೆಂದು ಧರ್ಮತ್ರಾತ ಹೇಳುತ್ತಾನೆ.

(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ